ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆ
ಜಿಲ್ಲಾಡಳಿತ, ಹಾಸನ
ಹಾಸನಾಂಬ ದೇವಿಯ ನೆಲೆ-ಹಿನ್ನೆಲೆ
ಕರ್ನಾಟಕ ರಾಜ್ಯದ ವಾರ್ಷಿಕ ವಿಶೇಷ ಜಾತ್ರಾ ಮಹೋತ್ಸವಗಳಲ್ಲಿ ಶ್ರೀ ಹಾಸನಾಂಬ ಜಾತ್ರಾ ಮಹೋತ್ಸವವು ಒಂದು. ವರ್ಷಕ್ಕೊಮ್ಮೆ ಹಾಸನಾಂಬ ದೇವಿ ದೇಗುಲದ ಬಾಗಿಲು ತೆರೆದು ಸಾರ್ವತ್ರಿಕ ದರ್ಶನಕ್ಕೆ ಅವಕಾಶ ಮಾಡಲಾಗುತ್ತದೆ. ಪ್ರತೀ ವರ್ಷದ ಪಂಚಾಂಗದ ಪ್ರಕಾರ ಆಯಾ ವರ್ಷಗಳಲ್ಲಿ ೯ ದಿನ, ೧೩ ದಿನ ದರ್ಶನಕ್ಕೆ ಅವಕಾಶ ಇರುತ್ತದೆ.
ಧಾರ್ಮಿಕ ವಿಧಿ ವಿಧಾನಗಳ ನಂತರ ಅರ್ಚಕರು, ಗಣ್ಯರು ಮತ್ತು ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲಿ ಜಿಲ್ಲಾಡಳಿತ ದೇವಿ ಗುಡಿಯ ಬಾಗಿಲು ತೆರೆದು ದರ್ಶನಕ್ಕೆ ಅವಕಾಶ ಮಾಡುತ್ತದೆ.
ಶ್ರೀ ಸಿದ್ದೇಶ್ವರ ಮತ್ತು ಶ್ರೀ ಹಾಸನಾಂಬ ದೇವಿಯ ದೇಗುಲವು ಸುಮಾರು ೧೨ನೇ ಶತಮಾನದಲ್ಲಿ ಪಾಳೆಗಾರ ಕೃಷ್ಣಪ್ಪ ನಾಯಕ ಹಾಗೂ ಸಂಜೀವ ನಾಯಕ ಅವರ ಕಾಲದಲ್ಲಿ ಸ್ಥಾಪಿತವಾಗಿದೆ ಎಂದು ಈ ಸ್ಥಳದಲ್ಲಿ ದೊರೆತ ಶಿಲಾಶಾಸನಗಳಿಂದ ತಿಳಿದು ಬರುತ್ತದೆ.
ಶ್ರೀ ಹಾಸನಾಂಬ ದೇವಿಯು ಶಕ್ತಿ ಸ್ವರೂಪಿಣಿಯಾಗಿದ್ದು ಸ್ಥಳ ಪುರಾಣದ ಪ್ರಕಾರ ಸಪ್ತ ಮಾತೃಕೆಯರು ವಾರಣಾಸಿಯಿಂದ ವಾಯು ವಿಹಾರಕ್ಕಾಗಿ ಹಾಸನಕ್ಕೆ ಬಂದರು, ಅವರಲ್ಲಿ ವೈಷ್ಣವಿ, ಮಹೇಶ್ವರಿ, ಕೌಮಾರಿ ದೇವತೆಯರು ದೇವಸ್ಥಾನದ ಸುತ್ತಲಿನ ಹುತ್ತದಲ್ಲಿ ನೆಲೆಸಿದ್ದಾರೆಂಬುದು ಸ್ಥಳೀಯ ಜನರ ನಂಬಿಕೆಯಾಗಿದೆ. ಹಾಗೆಯೇ ಕೆಂಚಮ್ಮ, ಬ್ರಾಹ್ಮಿಯಂತ ಸಪ್ತ ಮಾತೃಕೆಯರು ಆಲೂರು ಹಾಗೂ ಹಾಸನದ ವಿವಿಧ ಸ್ಥಳಗಳಲ್ಲಿ ನೆಲೆಸಿದ್ದಾರೆಂದು ಪುರಾಣ ಹೇಳುತ್ತದೆ.
ಪೌರಾಣಿಕ ಕಥೆಯನುಸಾರ ಶ್ರೀ ಹಾಸನಾಂಬ ದೇವಿಯ ಸ್ವರೂಪವು, ಭಕ್ತಿಯ ಪಾವಿತ್ರ್ಯತೆ ಹಾಗೂ ಮೈತ್ರಿಯ ಸಂಕೇತವಾಗಿದೆ. ಈ ಪ್ರಾಂತದಲ್ಲಿ ಅಂದು ಅಂಧಕಾಸುರ ಎಂಬ ರಾಕ್ಷಸ ಜನ ಸಾಮಾನ್ಯರಿಗೆ ಉಪಟಳ ನೀಡುತ್ತಿದ್ದನು. ಅವನನ್ನು ನಿಗ್ರಹಿಸಲು ಶಕ್ತಿ ಸ್ವರೂಪಿಣಿಯಾಗಿ ಬಂದ ಶ್ರೀ ಹಾಸನಾಂಬ ದೇಪರಾಕ್ರಮ ಮೆರೆದು ಈ ಪ್ರಾಂತ್ಯದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡಿದರು ಎನ್ನುತ್ತದೆ. ಈ ದೇಗುಲದ ಕೆತ್ತನೆ, ದ್ರಾವಿಡ ಶೈಲಿಯ ರಾಜಗೋಪುರ ಇರುವುದನ್ನು ಕಾಣ ಬಹುದು.
ಬೆಂಗಳೂರಿನಿಂದ ಹಾಸನಕ್ಕೆ ರಸ್ತೆ ಮಾರ್ಗದಿಂದ ತಲುಪಬಹುದು (189KM, Aprox 3Hr 12Min) . ಭಾರತೀಯ ರೈಲ್ವೇ ರೈಲುಗಳು ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳ ವ್ಯವಸ್ಥೆ ಇದೆ.
ದೂರದ ಊರುಗಳಿಂದ ಶ್ರೀ ಹಾಸನಾಂಬ ದೇವಿ ದರ್ಶನಕ್ಕೆ ಆಗಮಿಸುವವರಿಗೆ ಅನುಕೂಲವಾಗುವಂತೆ ಮುಂಗಡವಾಗಿ ದರ್ಶನ ಟಿಕೆಟ್ ಕಾಯ್ದಿರಿಸಿ ಒತ್ತಡ ರಹಿತವಾಗಿ ಸುಗಮ ದರ್ಶನ ಪಡೆಯಲು ಜಿಲ್ಲಾಡಳಿತ ವಾಟ್ಸಾಪ್ ಚಾಟ್ ಬಾಟ್ (WhatsApp Number 6366105589) Sri Hassanaamba Mobile App ಹಾಗೂ ಶ್ರೀ ಹಾಸನಾಂಬ ಟೆಂಪಲ್ ಎಂಬ ವೆಬ್ಸೈಟ್ ಗಳ ಮೂಲಕ ಟಿಕೆಟ್ ಬುಕ್ಕಿಂಗ್ ಹಾಗೂ ಜಾತ್ರೋತ್ಸವದ ಇತರೆ ಮಾಹಿತಿಗಳನ್ನು ತಿಳಿಯುವ ಅವಕಾಶ ಮಾಡಿದೆ.